Monday, January 5, 2009

Tiruppaavai lectures by Sri B. Sree Rama Murthy

ಪದ್ಯ - ೯
ಪ್ರಶಸ್ತವಾದ ರತ್ನಗಳಿಂದ ರಚಿತವಾದ ಮಾಳಿಗೆಯಮೇಲೆ ಸುತ್ತಲೂ ದೀಪಗಳು ಜ್ವಲಿಸುತ್ತಾ, ಒಳಗೆಲ್ಲಾ ಧೂಪದ ಪರಿಮಳವು ಘಮಘಮಿಸುತ್ತಿರಲು, ಮೆತ್ತನೆಯ ಹಾಸಿಗೆಯಮೇಲೆ ಮಲಗಿರುವ ಮಾವನ ಮಗಳೇ, ಮಣಿ ಮಯವಾದ ಬಾಗಿಲ ಚಿಲಕವನ್ನು ತೆರೆ. ಸೋದರತ್ತೆಯೇ, ನೀನಾದರೂ ಅವಳನ್ನು ಎಬ್ಬಿಸು. ನಿಮ್ಮ ಮಗಳೇನು ಮೂಕಿಯೇ, ಕಿವುಡಳೇ, ಜಾಡ್ಯಪೀಡಿತಳೇ ಅಥವಾ ಯಾರದಾದರೂ ಮಂತ್ರಕ್ಕೆ ಒಳಪಟ್ಟಿರುವಳೋ? ಏನಿದು ಗಾಢ ನಿದ್ರೆ! ಇವಳಿಗೆ ಅತ್ಯಂತ ಮಾಯಾಶಕ್ತಿಯುಳ್ಳ್ಳವನೂ ಲಕ್ಷ್ಮೀಪತಿಯೂ ಆದ ನಮ್ಮ ಶ್ರೀ ವೈಕುಂಠನಾಥನು ಅವನ ಅನೇಕ ಶ್ರೀ ನಾಮಗಳನ್ನು ಪದೇ ಪದೇ ಸಂಕೀರ್ತನೆ ಮಾಡಿದರೆ ಈ ನಮ್ಮ ವಿಲಕ್ಷಣ ವ್ರತವು ಸಿದ್ದಿಸುವುದೆಂದು ತಿಳಿದಿಲ್ಲವೇ.

Tiruppavai lectures by Sri B. Sree Rama Murthy

ಪದ್ಯ - ೮
ಕುತೋಹಲ ಕಾರಿಯಾದ ಹೆಣ್ಮಗಳೇ! ಪೂರ್ವ ದಿಕ್ಕಿನಲ್ಲಿ ಆಕಾಶವು ಬಿಳುಪಾಗಿರುವುದರಿಂದ ಎಮ್ಮೆಗಳು ಎಳೆ ಗರಿಕೆ ಹುಲ್ಲನ್ನು ಮೇಯಲು ಹೊರಟಿವೆ ನೋಡು.ಹೋಗಲು ಸಿದ್ಧರಾಗಿದ್ದ ಇತರ ಎಲ್ಲಾ ಹೆಣ್ಣುಮಕ್ಕಳನ್ನೂ ಹೋಗದಂತೆ ತಡೆದು ನಿನ್ನನ್ನು ಕೂಗಲು ನಾವು ಬಂದಿದ್ದೇವೆ. ನೀನು ಎದ್ದು ಬಾ. ನಾವು ಪರಮಾತ್ಮನನ್ನು ಸ್ತೋತ್ರ ಮಾಡಿ ಹಾಡಿ, ಪರೈ ಎಂಬ ಆಯುಧವನ್ನು ಪಡೆದು ಕೇಶಿ ಎಂಬ ಅಸುರನ ಬಾಯನ್ನು ಸೀಳಿದವನೂ, ಮಲ್ಲರನ್ನು ಸೋಲಿಸಿದವನೂ, ಆದ ಶ್ರೀ ಕೃಷ್ಣನ ಬಳಿಗೆ ಹೋಗಿ ಅತನಿಗೆ ನಮಸ್ಕರಿಸಿದರೆ, ಅವನು ನಮ್ಮ ಕೊರತೆಗಳನ್ನೆಲ್ಲಾ ವಿಚಾರಿಸಿ, ಮನ ಕರಗಿದವನಾಗಿ ನಮ್ಮ ಇಷ್ಟಾರ್ಥಗಳನ್ನು ಅರಿತು ಕೃಪೆಮಾಡುವನು. ನಮ್ಮ ಅದ್ವಿತೀಯ ವ್ರತವು ಶುಭವಾಗಿ ನೆರೆವೇರುವುದು.

Tiruppaavai Lectures by Sri B. Sree Rama Murthy

ಪದ್ಯ - ೭
ಭಾರದ್ವಾಜ ಪಕ್ಷಿಗಳ "ಕೀಶು ಕೀಶು" ಎಂಬ ಶಬ್ದಗಳು ನಿನಗೆ ಕೇಳಿಸುತ್ತಿಲ್ಲವೇ? ಬೆಳಗಾಯಿತೆನ್ನಲು ಇದು ಸೂಚನೆಯಲ್ಲವೇ: ಎಲೈ ಹುಚ್ಚು ಹುಡುಗಿ! ಸುಗಂಧ ಕೇಶವುಳ್ಳ ಗೋಪಿಯರು ಪ್ರಭಾತಕಾಲದಲ್ಲಿ ಮೊಸರು ಕಡೆಯುತ್ತಿರುವಾಗ ಅವರ ಕಂಠದಲ್ಲಿರುವ ಆಭರಣಗಳು (ಅಚ್ಚುತಾಲಿ ಮತ್ತು ಆಮೆತಾಲಿಗಳು) ಕಲಕಲವೆಂದು ಶಬ್ಧಮಾಡುತ್ತಾ, ಕೈಬಳೆಗಳೂ ಸೇರಿಕೊಂಡು, ಮತ್ತಿನಿಂದ, ಮೊಸರು ಕಡೆಯುವ ಶಬ್ದವಾಗುತ್ತಿರುವುದು ನಿನಗೆ ಕೇಳಿಸಲಿಲ್ಲವೇ? ನಮಗೆ ಒಡತಿಯಸ್ಥಾನದಲ್ಲಿರುವ (ಸ್ವಾಮಿನಿಯಾದ) ಹೆಣ್ಣುಮಗಳೇ, ಶ್ರೀಮನ್ನಾರಾಯಣ ಮೂರ್ತಿ ಸ್ವರೂಪನೇ ಆದ ಶ್ರೀ ಕೇಶವನ್ನನ್ನು ಕುರಿತು ನಾವು ಹಾಡುತ್ತಿದ್ದರೂ ನೀನು ಕೇಳುತ್ತಲೇ ನಿದ್ರೆಮಾಡುತ್ತಿರುವಿಯೋ, ಹೇಗೆ? ತೇಜೋಮಯಳಾಗಿ ಬಂದು ಬಾಗಿಲನ್ನು ತೆರೆ. ನಮ್ಮ ಈ ವಿಲಕ್ಷಣ ವ್ರತವು ಸಿದ್ಧಿಸಲಿ.

Friday, January 2, 2009

ತಿರುಪ್ಪಾವೈ-ಶ್ರೀ ಬಿ.ಶ್ರೀರಾಮಮೂರ್ತಿಯವರಿಂದ ಉಪನ್ಯಾಸ.


ಪದ್ಯ -೬
ಏನೂ ಅರಿಯದ ಓ! ಚಿಕ್ಕ ಹುಡುಗಿಯೇ! ಬೆಳಗಾಯಿತು. ಪಕ್ಷಿಗಳು ಕೂಡಾ ಚಿಲಿಪಿಲಿಗುಟ್ಟುತ್ತಾ ಶಬ್ದಮಾಡುತ್ತಿವೆ. ಪಕ್ಷಿರಾಜನಾದ ಗರುಡನಿಗೆ ಪ್ರಭುವಾಗಿರುವ ಪರಮಾತ್ಮನ ದೇವಾಲಯದಲ್ಲಿ ಬಿಳಿಯ ಶಂಖದ ಮಹಾನಾದವನ್ನು ಕೇಳಲಿಲ್ಲವೇ? ಬೇಗ ಏಳುವವಳಾಗು. ರಾಕ್ಷಸಿಯಾದ ಪೂತನಿಯ ವಿಷಭರಿತವಾದ ಸ್ತನ್ಯಪಾನಮಾಡಿ ಗಾಡಿಯರೂಪದಿಂದ ಬಂದ ವಂಚಕ ಶಕಟಾಸುರನನ್ನು ಅವನ ಬಲವೆಲ್ಲಾ ನಾಶವಾಗುವಂತೆ ಕಾಲಿನಿಂದ ಒದೆದು, ಕ್ಷೀರಾಬ್ದಿಯಲ್ಲಿ ಆದಿಶೇಷನಮೇಲೆ ಮಲಗಿ ಯೋಗನಿದ್ರೆಯಲ್ಲಿರುವ ಜಗತ್ಕಾರಣಿಭೂತನಾದ ಪರಮಾತ್ಮನನ್ನು, ಮನಸ್ಸಿನಲ್ಲಿ ಧ್ಯಾನಿಸುತ್ತಾ, ಮುನಿಗಳೂ, ಯೋಗಿಗಳೂ, ಮೆಲ್ಲನೆ ಎದ್ದು "ಹರಿ ಹರಿ" ಎಂದು ಹೇಳುವ ಮಹಾಘೋಷವು ನಮ್ಮ ಹೃದಯದೊಳಗೆ ಪ್ರವೇಶಿಸಿ ನಮ್ಮ ಮನಸ್ಸಿಗೆ ತಂಪನ್ನುಂಟುಮಾಡಿ ನಮ್ಮ ಸಂತಾಪವನ್ನು ಹೋಗಲಾಡಿಸಿದೆ. ನಮ್ಮ ಅದ್ವಿತೀಯವಾದ ಈ ವ್ರತವು ಶುಭವಾಗಿ ನೆರವೇರುತ್ತದೆ.

Thursday, January 1, 2009

tiruppaavai-by Sri B. Sree Rama Murthy


ಪದ್ಯ -೫
ಉತ್ತರ ದೇಶದ ಮಥುರಾಪುರಿಯಲ್ಲಿ ಶಿಶುವಾಗಿ ಜನಿಸಿದ ಆಶ್ಚರ್ಯ ಗುಣ ಚೇಷ್ಟಿತನಾದ, ಪರಿಶುದ್ಢವೂ, ಅತ್ಯಧಿಕವೂ ಆದ ನೀರಿನಿಂದ ಕೂಡಿರುವ ಯಮುನಾನದಿಯತೀರ ಪ್ರದೇಶದಲ್ಲಿ ವಾಸಿಸುವವನೂ, ಗೊಲ್ಲರ ಕುಲದಲ್ಲಿ ಬಂದು ನಲಸಿ ಅದಕ್ಕೆ ಮಂಗಳಕರವಾದ ರತ್ನದೀಪದಂತಿರುವವನೂ, ತಾಯಿಯ ಉದರವನ್ನು ಪ್ರಕಾಶ ಪಡಿಸಿದವನೂ ಆದ ದಾಮೋದರನ ಬಳಿಗೆ, ಅಂದರೆ, ತಾನಾಗಿ ತಾಯಿ ಯೆಶೋದೆಯಿಂದ ಹಗ್ಗದಲ್ಲಿ ಕಟ್ಟಿಸಿಕೊಂಡು ಅವಳಿಗೆ ಅತ್ಯಂತ ಸುಲಭನಾಗಿರುವ ಶ್ರೀ ಕೃಷ್ಣನ ಬಳಿಗೆ ನಾವು ಪರಿಶುದ್ಧರಾಗಿ ಬಂದು ಶುದ್ಧವಾದ ಪುಷ್ಪಗಳನ್ನು ಅವನಿಗೆ ಸಮರ್ಪಿಸಿ ಬಾಯಿಂದ ಅವನ ಕಲ್ಯಾಣ ಗುಣಗಳನ್ನು ಹಾಡಿ ಮನಸ್ಸಿನಿಂದ ಅವನನ್ನೇ ಚಿಂತಿಸುತ್ತಿದ್ದರೆ ಹಿಂದೆ ನಾವು ಮಾಡಿದ ಪಾಪಗಳೂ, ಇಂದು ಮಾಡಿರುವ ಪಾಪಗಳೂ ಮತ್ತು ಮುಂದೆ ಮಾಡುವ ಪಾಪಗಳೂ ಎಲ್ಲವೂ ಬೆಂಕಿಯಲ್ಲಿಟ್ಟ ಹತ್ತಿಯಂತೆ ಸುಟ್ಟು ಭಸ್ಮವಾಗಿ ನಾಶವಾಗುವುವು. ಆದ್ದರಿಂದ ಅವನ ದಿವ್ಯ ನಾಮಸ್ಮರಣೆಮಾಡೋಣ. ಆಗ ನಮ್ಮ ಈ ವಿಲಕ್ಷಣವಾದ ವ್ರತವು ಸಾಂಗವಾಗಿ ಶುಭವಾಗಿ ನೆರೆವೇರುವುದು.